ಅರ್ಥವಿಲ್ಲದ ಶಬ್ದಕ್ಕೆ, ಗಲಾಟೆಗೆ ಗದ್ದಲವೆನ್ನುತ್ತೇವೆ. ಅರ್ಥವತ್ತಾಗಿ ಹಾರ್ಮೋನಿಯಂ ಮೀಟಿ ನುಡಿಸಿದರೆ ಸಂಗೀತವಾಗುತ್ತದೆ. ಪ್ರತಿಯಾಗಿ ಮನಸ್ಸು ಬಂದಂತೆ ನಾಲ್ಕಾರು ಮನೆಗಳನ್ತೊತ್ತಿದರೆ ಗದ್ದಲವಾಗುತ್ತದೆ. ವರ್ಣಮಾಲೆಯಲ್ಲಿನ ಅಕ್ಷರಗಳನ್ನು ಉಚ್ಚರಿಸಿದಾಗ ವ್ಯವಸ್ಥಿತಶಬ್ದ ಉತ್ಪತ್ತಿಯಾಗುತ್ತದೆ. ಪ್ರತಿಯಾಗಿ ಗುಹಾಧ್ವನಿ, ತೇಗು, ಬಿಕ್ಕಳಿಕೆ, ಅರಚಾಟ ಇವು ಗದ್ದಲವೆನಿಸುತ್ತವೆ. ಸಂತೆಯಲ್ಲಿ ಪ್ರತಿಯೊಬ್ಬನೂ ನಿರಾತಂಕವಾಗಿ ತನ್ನ ತನ್ನ ವ್ಯವಹಾರವನ್ನು ಮಾಡುತ್ತಿರುತ್ತಾನಾದರೂ ಒಟ್ಟು ಸಂತೆಯನ್ನು ದೂರದಿಂದ ನೋಡುವವನಿಗೆ ಅಲ್ಲಿ ಬರೀ ಗದ್ದಲ, ಗಲಾಟೆ ನಡೆಯುತ್ತಿರುವಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲ. ಪಾಠ ಹೇಳುವ ಉಪಾಧ್ಯಾಯನಿಗೆ ವಿದ್ಯಾರ್ಥಿಗಳ ಗುಸಗುಸ ಮಾತು ಗದ್ದಲ. ಹಾಡುವವನಿಗೆ ಪಕ್ಕದಲ್ಲಿ ಕುಳಿತು ಓದುವವನದು ಗದ್ದಲ. ಓದುವ ವಿದ್ಯಾರ್ಥಿಗೆ ಸಂಗೀತವೇ ಗದ್ದಲ. ಇನ್ನೂ ಸೂಕ್ಷ್ಮವಾಗಿ ನೋಡುವುದಾದರೆ ಒಬ್ಬನಿಗೆ ಈಗ ಸಂಗೀತವೆನಿಸಿದ್ದು ಇನ್ನೊಂದು ಕ್ಷಣಕ್ಕೆ ಗದ್ದಲವೆನಿಸುತ್ತದೆ.

ಮೇಲಿನ ಪರಿಶೀಲನೆಯಲ್ಲಿ ಗದ್ದಲದ ಕೆಲವು ಸ್ತರಗಳನ್ನು ಮಾತ್ರ ಬಣ್ಣಿಸಿದೆ. ನಿಜವಾಗಿ ಗದ್ದಲದ ಕ್ಷೇತ್ರ ಇನ್ನೂ ಹೆಚ್ಚು ವ್ಯಾಪಕವಾದುದಾಗಿದೆ. ಎತ್ತಿನ ಗಾಡಿಯ ಗಾಲಿಗಳು ಉರುಳುವಾಗ, ಬಸ್ಸುಗಳು ಕಾರುಗಳು ಬುಯ್ ಎಂದು ಓಡಾಡುವಾಗ, ರೈಲು ಧಾವಿಸುವಾಗ, ವಿಮಾನ ಗಾಳಿಯನ್ನು ಕತ್ತರಿಸಿ ಹಾರುವಾಗ, ಅಕ್ಕಿ ಗಿರಣಿಯೋ ಡೈನಮೊ ಯಂತ್ರವೋ ಕೆಲಸಮಾಡುವಾಗ, ವಿದ್ಯುಚ್ಚಾಲಿತ ಗರಗಸಗಳು ದೊಡ್ಡ ದಿಮ್ಮಿಗಳನ್ನು ಕತ್ತರಿಸುವಾಗ, ಕಾಯಿಸಿದ ಕಬ್ಬಿಣವನ್ನು ಕಮ್ಮಾರ ದೊಡ್ಡ ಸುತ್ತಿಗೆಯಿಂದ ಕುಟ್ಟಿ ಹದಮಾಡುವಾಗ ಅದೆಷ್ಟು ಬಗೆಯ ಗದ್ದಲ ಕೇಳಿಬರುತ್ತದೆ. ಗಿರಣಿಗಳಲ್ಲಿ, ವಿದ್ಯುದುತ್ಪಾದನಾ ಕೇಂದ್ರಗಳಲ್ಲಿ ಹಗಲಿರುಳೂ ಸುತ್ತುವ ಬೃಹದ್ ಚಕ್ರಗಳಿಂದ ನಿರಂತರ ಹೊರಬರುವ ದೈತ್ಯಶಬ್ದ ಗದ್ದಲದ ಪರಮಾವಧಿಯನ್ನು ಸೂಚಿಸುತ್ತದೆ.

ಗದ್ದಲ ದಿನೇ ದಿನೇ ಹೆಚ್ಚುತ್ತಿದೆ ಎಂಬುದಕ್ಕೆ ಸಂಕೀರ್ಣಗೊಳ್ಳುತ್ತಿರುವ ನಾಗರಿಕ ಜೀವನವೇ ಸಾಕ್ಷಿಯಾಗಿದೆ. ಇಂಥ ಗದ್ದಲವನ್ನು ನಿವಾರಿಸುವುದು ಸಾಧ್ಯವೆ? ಅಥವಾ ಗದ್ದಲ ನಾಗರಿಕ ಜೀವನದ ಒಂದು ಅನಿವಾರ್ಯ ಅಂಶವೇ? ಮನುಷ್ಯನ ಮನಸ್ಸು ಮತ್ತು ದೇಹದ ಮೇಲೆ ಗದ್ದಲದ ಪರಿಣಾಮವೇನು? ಅಶುದ್ಧವಾದ ನೀರು ಗಾಳಿಗಳಂತೆ ಕರ್ಕಶ ಗದ್ದಲವೂ ಪರಿಸರವನ್ನು ಕೆಡಿಸುವುದಿಲ್ಲವೆ? ಊರು ಕೇರಿಗಳಲ್ಲಿ ಜೀವನ ನಡೆಸುತ್ತಿರುವವರಿಗೆ ಗದ್ದಲವಿಲ್ಲದ ಶಾಂತ ವಾತಾವರಣವನ್ನು ಕಲ್ಪಿಸಿಕೊಡುವುದು ಹೇಗೆ? ಗದ್ದಲದ ಮಧ್ಯೆಯೇ ಕೆಲಸ ಮಾಡುವ ಕಾರ್ಮಿಕರ ಪಾಡೇನು? ಇಂಥ ಪ್ರಶ್ನೆಗಳು ಮನಃಶಾಸ್ತ್ರಜ್ಞರನ್ನು, ವಿಜ್ಞಾನಿಗಳನ್ನು, ಸಮಾಜ ಸುಧಾರಕರನ್ನು ಬಹುಕಾಲದಿಂದ ಪೀಡಿಸುತ್ತಿವೆ. ಕಾಲಾನುಕಾಲಕ್ಕೆ ಗದ್ದಲವನ್ನು ನಿವಾರಿಸುವ ಕೆಲವು ವಿಧಾನಗಳನ್ನು ಅವರು ಸೂಚಿಸಿಯೂ ಇದ್ದಾರೆ. ಇ. ಜೆ. ಬೋರಿಂಗ್, ಜೆ. ಜೆ. ಮಾರ್ಗನ್, ಲೈರ್, ಎಮ್. ಎಸ್. ವೈಟಲಿಸ್ ಮೊದಲಾದವರ ಅಧ್ಯಯನಗಳಿಂದ ಹೊರಪಟ್ಟ ಕೆಲವು ಅಂಶಗಳನ್ನು ಇಲ್ಲಿ ಗಮನಿಸಬಹುದು.

 ಅನೈಚ್ಛಿಕ ದೈಹಿಕ ಕ್ರಿಯೆಗಳಿಗೆ ಗದ್ದಲ ಅಡ್ಡಿಯಾಗುತ್ತದೆಂಬುದಕ್ಕೆ ಯಾವ ಪ್ರಾಯೋಗಿಕ ಪ್ರಮಾಣವೂ ದೊರೆತಿಲ್ಲ. ಆದರೂ ಬಹು ತೀವ್ರವೂ ನಿರಂತರವೂ ಆದ ಕರ್ಕಶ ಶಬ್ದಗಳಿಂದ ಅನೈಚ್ಛಿಕ ಕ್ರಿಯೆಗಳ ಮೇಲೂ ದುಷ್ಪರಿಣಾಮಗಳುಂಟಾಗುತ್ತ ವೆಂದು ಭಾವಿಸಬಹುದು. 
 ಗದ್ದಲ ಯಾವ ಪ್ರಮಾಣದ್ದೇ ಇರಲಿ ಅದರಿಂದ ಮಾನಸಿಕ ದೈಹಿಕ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮಗಳು ಇದ್ದೇ ಇವೆ. ಗದ್ದಲವಿದ್ದಾಗ ಮನಸ್ಸು ಚಟುವಟಿಕೆಯಿಂದ ಕೆಲಸ ಮಾಡದು. ಏಕಾಗ್ರತೆ ಕೆಡುತ್ತದೆ. ಕೈ ಓಡುವುದಿಲ್ಲ. ಗದ್ದಲದ ಪ್ರತಿಘಾತವನ್ನು ಮೀರಿ ಕೆಲಸಮಾಡಲು ಮನುಷ್ಯ ಹೆಚ್ಚು ಹೆಚ್ಚು ಹೆಣಗಬೇಕಾಗುತ್ತದೆ.
 ಓದುವ ಮಕ್ಕಳು, ನರಳುವ ರೋಗಿಗಳು ಗದ್ದಲವನ್ನು ಸಹಿಸರು. ಸೂಕ್ಷ್ಮ ತರವಾದ ಚಿಂತನೆಗಳಲ್ಲಿ ನಿರತರಾಗುವವರಿಗಂತೂ ಅಲ್ಪಸ್ವಲ್ಪ ಗದ್ದಲವೂ ಹಿಡಿಸದು. ಗ್ರಂಥಾಲಯ, ಶಾಲೆ, ಆಸ್ಪತ್ರೆ ಮೊದಲಾದೆಡೆ ವಾತಾವರಣ ಶಾಂತಿಯುತವಾಗಿರಬೇಕೆಂದು ಹೇಳುವುದು ಈ ಉದ್ದೇಶದಿಂದಲೇ.
 ಈಗೊಮ್ಮೆ ಆಗೊಮ್ಮೆ ಉಂಟಾಗುವ ಗದ್ದಲದಿಂದ ಹೆಚ್ಚಿನ ಕೆಡುಕಾಗುತ್ತದೆ. ಏಕೆಂದರೆ ಯಾರೂ ಇಂಥ ಆಕಸ್ಮಿಕಗಳಿಗೆ ದೈಹಿಕವಾಗಿ ಮಾನಸಿಕವಾಗಿ ಸಿದ್ಧರಾಗಿರುವುದಿಲ್ಲ. ಗದ್ದಲ ನಿರಂತರವಾಗಿದ್ದಲ್ಲಿ ಅಭ್ಯಾಸಬಲದಿಂದ ಮನುಷ್ಯ ಸ್ವಲ್ಪ ಮಟ್ಟಿಗೆ ಅದಕ್ಕೆ ಹೊಂದಿಕೊಂಡು ಬಿಡುತ್ತಾನೆ.

ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಊರು ಕೇರಿಗಳ ವಾತಾವರಣ ಗದ್ದಲ ರಹಿತವಾಗಿರುವಂತೆ ನೋಡಿಕೊಳ್ಳಬೇಕಾದದ್ದು ಅಲ್ಲಲ್ಲಿನ ಸರ್ಕಾರಗಳ ಮತ್ತು ಪುರಸಭೆಯವರ ಕರ್ತವ್ಯ. ಬೆಂಗಳೂರು, ಕೋಲ್ಕತ್ತ ಮೊದಲಾದ ದೊಡ್ಡ ನಗರಗಳಲ್ಲಿ ರಾತ್ರಿ ಇಡೀ ಆಗುವ ವಾಹನ ಸಂಚಾರವನ್ನು ಈ ದೃಷ್ಟಿಯಿಂದ ನಿಯಂತ್ರಿಸುವುದು ಅಗತ್ಯ. ಜರ್ಮನಿಯ ಕೆಲವು ಭಾಗಗಳಲ್ಲಿ ಈ ಪ್ರಯೋಗ ನಡೆಸಿದ್ದಾರೆ. ಪ್ರಚಾರಕ್ಕಾಗಿ ಧ್ವನಿವರ್ಧಕಗಳ ಬಳಕೆ, ಸಂಗೀತದ ಹೆಸರಿನಲ್ಲಿ ರೇಡಿಯೋಗಳನ್ನು ಕೂಗಿಸುವುದು- ಇಂಥ ಪದ್ಧತಿಗಳು ರದ್ದಾದರೊಳ್ಳೆಯದು. ಜನವಸತಿಗಳ ಸನಿಹದಲ್ಲೇ ಸಿನಿಮಾ, ನಾಟಕ, ಮಂದಿರಗಳು, ಕಾರ್ಖಾನೆಗಳು, ಮುದ್ರಣಾಲಯಗಳು, ಕಮ್ಮಾರನ ಕುಲುಮೆ ಗಳು- ಇತ್ಯಾದಿ ಇರಬಾರದು.
ಗಿರಣಿ, ಕಾರ್ಖಾನೆ, ಸರ್ಕಾರಿ ಕಚೇರಿ ಮುಂತಾದೆಡೆಗಳಲ್ಲಿ ಗದ್ದಲ ನಿಯಂತ್ರಣ ದಿಂದ ಕೆಲವು ಪ್ರಯೋಜನಗಳನ್ನು ಪಡೆಯಲಾಗಿದೆ. ಕಾರ್ಮಿಕರಿಗೆ ತಲಪುವ ಬಹಳ ಗದ್ದಲ ಯಂತ್ರಗಳಿಂದ ನೇರವಾಗಿ ಬಂದದ್ದಲ್ಲ, ಗೋಡೆ ಮತ್ತು ಒಳ ಮಳಿಗೆಯಿಂದ ಪ್ರತಿಧ್ವನಿತವಾದದ್ದು. ಆದಕಾರಣ ಗೋಡೆಗಳನ್ನು ಸಣ್ಣರಂಧ್ರಗಳಿರುವ ವಸ್ತುವಿನಿಂದ ಮುಚ್ಚಿದರೆ, ಶಬ್ದ ಈ ಸಣ್ಣ ಪುಟ್ಟ ರಂಧ್ರಗಳ ಹೊಕ್ಕು ಹೊರಗೆ ಬರಲಾರದು. ಈ ವಿಧಾನದಿಂದ ಅನೇಕ ಕಾರ್ಖಾನೆಗಳಲ್ಲಿ ಗದ್ದಲವನ್ನು ನಿಯಂತ್ರಿಸಲಾಗಿದೆ. ಈ ವಿಧಾನದಿಂದ ಒಂದು ಟೆಲಿಗ್ರಾಫ್ ಕಚೇರಿಯಲ್ಲಿಯ ದೋಷಗಳು ಶೇ.42 ಕಡಿಮೆಯಾದುವು. ಲೆಕ್ಕಪತ್ರದ ಇಲಾಖೆಯಲ್ಲಿ ಶೇ.24 ದೋಷಗಳು ಕಡಿಮೆಯಾದವು. ಒಂದು ಉಣ್ಣೆ ಗಿರಣಿಯ ನೇಯುವ ಇಲಾಖೆಯಲ್ಲಿ ಶೇಕಡ ಶೇ.3 ಉತ್ಪಾದನೆ ಹೆಚ್ಚಿತು. ಬೆರಳಚ್ಚು ವಿಭಾಗವೊಂದರಲ್ಲಿ ವೇಗ ಶೇ.10 ರಷ್ಟು ಹೆಚ್ಚಿತ್ತಲ್ಲದೆ ದೋಷಗಳು ಶೇ.30 ಕಡಿಮೆಯಾದುವು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ